
26th April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಹೇಳಿದರು
ಅವರು ಶುಕ್ರವಾರ ಕೊಪ್ಪಳ ನಗರದ ಹಳೆ ಜನರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ-2025ರ ಅಂಗವಾಗಿ ಕೊಪ್ಪಳ ಜಿಲ್ಲೆಯಲ್ಲಿ ಮಲೇರಿಯಾ ರೋಗದ ಹರಡುವಿಕೆ ನಿಯಂತ್ರಣ ಹಾಗೂ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲೇರಿಯಾ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಲ್ಲಾ ರೀತಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವರ್ಷ ‘ಏಪ್ರಿಲ್ 25’ರಂದು ಪ್ರಪಂಚದಾದ್ಯಂತ ‘ವಿಶ್ವ ಮಲೇರಿಯ ದಿನ’ ವನ್ನಾಗಿ ಆಚರಿಸಲಾಗುತ್ತಿದೆ. ಈಗ ಮಳೆಗಾಲ ಪ್ರಾರಂಭವಾಗುತ್ತಿದ್ದು, ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟು ಸೊಳ್ಳೆಗಳ ಸಂತತಿ ಹೆಚ್ಚಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾದಂತಹ ರೋಗಗಳ ಹೆಚ್ಚಳವಾಗುವ ಎಲ್ಲಾ ಸಾದ್ಯತೆ ಇರುತ್ತದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಲೇರಿಯಾ ರೋಗಕ್ಕೆ ನಿರ್ಧಿಷ್ಟ ಚಿಕಿತ್ಸೆ ಇದ್ದು, ಜನರೂ ಭಯಪಡುವ ಅವಶ್ಯಕತೆ ಇಲ್ಲ. ಯಾವುದೇ ಜ್ವರ ಇರಲಿ ಶೀಘ್ರವೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಲು ಜನಸಮುದಾಯಕ್ಕೆ ಕರೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ.ವೆಂಕಟೇಶ್ ಅವರು ಮಾತನಾಡಿ, ಇಡಿ ದೇಶದಾದ್ಯಂತ 2030 ರೊಳಗಾಗಿ ಮಲೇರಿಯಾ ರೋಗವನ್ನು ಸಂಪೂರ್ಣ ನಿವಾರಣೆಗೊಳಿಸಲು ಗುರಿ ನಿಗಧಿಪಡಿಸಿ ರಾಷ್ಟ್ರೀಯ ಮಲೇರಿಯಾ ನಿವಾರಣಾ ಮಾರ್ಗದರ್ಶಿ (National Frame Work For Malaria Elimination NFME) ಯನ್ನು ಅನಾವರಣಗೊಳಿಸಲಾಗಿದೆ. ಅದರಂತೆ ಕರ್ನಾಟಕ ಸರಕಾರವು ಕೂಡ ರಾಜ್ಯದಲ್ಲಿ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಿದ್ದು, ಅದರನ್ವಯ ರಾಜ್ಯದಲ್ಲಿ 2027ನೇ ಇಸ್ವಿ ವೇಳೆಗೆ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ನಿಗಧಿಪಡಿಸಲಾಗಿದೆ ಎಂದರು.
2025ನೇ ಸಾಲಿನ ‘ವಿಶ್ವ ಮಲೇರಿಯ ದಿನಾಚರಣೆ’ಯ ಘೋಷಣೆಯು “ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರು ಹೂಡಿಕೆ, ಮರು ಕಲ್ಪನೆ, ಮರು ಉತ್ತೇಜನ ನೀಡೋಣ” ಎಂಬುದಾಗಿರುತ್ತದೆ. ಅದರಂತೆ ಕೊಪ್ಪಳ ಜಲ್ಲೆಯನ್ನು 2027ರ ವೇಳೆಗೆ ಸಂಪೂರ್ಣ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸರ್ವರ ಸಹಕಾರ ಅಗತ್ಯವಾಗಿದೆ. ಮಲೇರಿಯಾ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದು ಸೋಂಕಿತ ಅನಾಫಿಲಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಹಾಗೂ ಈ ಸೊಳ್ಳೆಗಳು ಬಹುತೇಕ ಸಂಜೆ ಹೊತ್ತಿನಲ್ಲಿಯೇ ಕಚ್ಚುತ್ತವೆ ಹಾಗಾಗಿ ಜನಸಮುದಾಯವು ಸ್ವಯಂ ರಕ್ಷಣ ವಿಧಾನಗಳನ್ನು ಬಳಸಿ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಬೇಕು ಎಂದು ಹೇಳಿದರು.
ಅನಾಫಿಲಿಸ್ ಸೊಳ್ಳೆಗಳು ಸ್ವಚ್ಛವಾದ ನೀರಿನಲ್ಲಿ, ಕೆರೆ, ಬಾವಿ, ಹೊಂಡ, ಕಾಲುವೆ ಮುಂತಾದ ನಿಂತ ನೀರಿನ ತಾಣಗಳಲ್ಲಿ ಮೊಟ್ಟೆಗಳನ್ನು ಇಟ್ಟು ಸಂತಾನಭಿವೃದ್ಧಿ ಮಾಡುತ್ತವೆ. ಆದ್ದರಿಂದ ಮನೆಯ ಒಳಗೆ ಮತ್ತು ಹೊರಗೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಹಾಗೂ ನೀರು ಶೇಖರಣೆ ಸಲಕರಣೆಗಳನ್ನು ಸದಕಾಲ ಮುಚ್ಚಿಡಬೇಕು. ಕೊಪ್ಪಳ ಜಿಲ್ಲೆಯಲ್ಲಿ 2005 ರಲ್ಲಿ 6634 ಮಲೇರಿಯಾ ಪ್ರಕರಣಗಳು ವರದಿಯಾಗಿದ್ದು, 2017 ರಲ್ಲಿ ಕೇವಲ 159 ಮಲೇರಿಯಾ ಪ್ರಕರಣಗಳು 2019 ರಲ್ಲಿ 15 ಪ್ರಕರಣಗಳು ವರದಿಯಾಗಿವೆ. ಆದರೇ 2020 ರಿಂದ 2024-25 ರವರೆಗೆ ಯಾವುದೇ ಸ್ಥಳೀಯ ಮಲೇರಿಯಾ ಪ್ರಕರಣಗಳು ವರದಿಯಾಗಿರುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಶೂನ್ಯ ಮಲೇರಿಯಾ ಸ್ಥಿತಿಯನ್ನು ಕಾಪಾಡಿಕೊಂಡು ಉತ್ತರಕರ್ನಾಟಕ ಜಿಲ್ಲೆಗಳಲ್ಲಿ ಶೂನ್ಯ ಮಲೇರಿಯಾ ಸ್ಥಿತಿಯನ್ನು ಕಾಪಾಡಿಕೊಂಡಿರುವ ಉತ್ತರ ಕರ್ನಾಟಕದ ಏಕೈಕ ಜಿಲ್ಲೆಯಾಗಿದ್ದು, ಕೊಪ್ಪಳ ಜಿಲ್ಲಾಢಳಿತದ ಸಹಕಾರ ಹಾಗೂ ಆರೋಗ್ಯ ಇಲಾಖೆಯ ಪರಿಶ್ರಮ ಕಾರಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಪ್ರಕಾಶ್ ವಿ., ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ನಂದಕುಮಾರ್, ಜಿಲ್ಲಾ ಕುಷ್ಟರೋಗ ನಿವಾರಣಾ ಅಧಿಕಾರಿ ಡಾ. ಪ್ರಕಾಶ್, ಜಿಲ್ಲಾ ಕುಷ್ಟರೋಗ ನಿವಾರಣಾ ಅಧಿಕಾರಿ ಡಾ. ಶಶಿಧರ್, ಕೊಪ್ಪಳ ತಾಲೂಕ ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಸೇರಿದಂತೆ ಜಿಲ್ಲಾ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು, ನಗರ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳು & ಸಿಬ್ಬಂದಿಗಳು ಉಪಸ್ಥಿತರಿಸಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಅವರು ಎಲ್ಲರಿಗೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇದೆ ವೇಳೆ ಎಲ್ಲರೂ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಕೊಪ್ಪಳ ನಗರದಾದ್ಯಂತ ವಿಜೃಂಭಣೆಯಿಂದ ಸಂಚರಿಸಿದ ಜನ ಜಾಗೃತಿ ಜಾಥದಲ್ಲಿ ತೆರೆದ ವಾಹನದಲ್ಲಿ ಮಲೇರಿಯಾ ವಿರೋಧಿ ಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ ಹಾಗೂ ಜನಜಾಗೃತಿ ಕರಪತ್ರಗಳನ್ನು ಹಂಚುವುದು, ಭ್ಯಾನರ್ ಮತ್ತು ಪೋಸ್ಟರ್ಗಳನ್ನು ಪ್ರದರ್ಶಿಸಿಸುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ